ಬರಗಾಲ ನಿರ್ವಹಣೆ ಮುಂಜಾಗ್ರತೆ ಅಗತ್ಯ, ನಿಷ್ಕಾಳಜಿ ತೋರುವಂತಿಲ್ಲ : ಶಾಸಕ ಡಿ.ಎಚ್.ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಬರಗಾಲದಲ್ಲಿ ಜನ, ಜಾನುವಾರುಗಳಿಗೆ ನೀರಿನ ತಾಪತ್ರಯ ಹಾಗೂ ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೆ ನಿಷ್ಕಾಳಜಿ ತೋರುವಂತಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಬರ ನಿರ್ವಹಣೆ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಲು ಗುರುವಾರ ಕರೆದಿದ್ದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೂರೈಸುವ ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು. ತಾಂತ್ರಿಕ ದೋಷಗಳು ಎದುರಾದಲ್ಲಿ ತತಕ್ಷಣ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ಜೆಸ್ಕಾಂ ಎಇಇಗೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ನಿರ್ವಹಣೆ ಇಲಾಖೆ ಎಇಇ ವಿಜಯಕುಮಾರ ಮಾತನಾಡಿ, ಜಲಾಶಯದಲ್ಲಿ ನೀರು ಕೊರತೆಯಾದಾಗ ಕುಕನೂರು, ಯಲಬುರ್ಗಾ, ಕುಷ್ಟಗಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು. ಈ ಸನ್ನಿವೇಶದಲ್ಲಿ ಕೊಳವೆಬಾವಿಗಳ ಮೂಲಕ ಟ್ಯಾಂಕರ್’ಗಳಿಗೆ ನೀರು ಪೂರೈಸಬೇಕಾಗುತ್ತದೆ ಎಂದರು. ಬೇಸಿಗೆ ಆರಂಭದ ದಿನಗಳಲ್ಲಿ ಪಾಚಿಯುಕ್ತ ಕೊಳವೆಬಾವಿಗಳ ನೀರು ಸೇವನೆಯಿಂದ ಜನರಲ್ಲಿ ವಾಂತಿಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೊಳವೆಬಾವಿಗಳ ನೀರು ಪರೀಕ್ಷಿಸಿ ಪ್ರೆಸ್ಸಿಂಗ್ ಮಾಡಿಸಬೇಕು. ಪ್ರೆಸ್ಸಿಂಗ್ ಮಾಡಿಸಲು ಒಂದು ಕೊಳವೆಬಾವಿಗೆ 30 ಸಾವಿರ ರೂ. ವೆಚ್ಚವಾಗುತ್ತದೆ ಎಂದ ಎಇಇ ವಿಜಯಕುಮಾರ್, ಮುಂಜಾಗ್ರತಾ ಕ್ರಮವಾಗಿ ಈಗಿನಿಂದಲೇ ಕುಕನೂರು, ಯಲಬುರ್ಗಾ, ಕುಷ್ಟಗಿ ತಾಲೂಕುಗಳಲ್ಲಿ ಎಲ್ಲಾ ಕೊಳವೆಬಾವಿ ನೀರು ಪರೀಕ್ಷೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಮೂರು ತಾಲೂಕಿನ ತಹಸೀಲ್ದಾರರು, ಇಒಗಳು, ಪಿಡಿಒಗಳಿಗೆ ಸಭೆ ನಡೆಸಲು ಪತ್ರ ಬರೆಯಲಾಗಿದೆ ಎಂದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ದೊಡ್ಡನಗೌಡ ಪಾಟೀಲ್, ಹೊಸ ಕೊಳವೆಬಾವಿ ಕೊರೆಯಿಸಲು ತಮ್ಮ ಅನುದಾನದಲ್ಲಿ 30 ಲಕ್ಷ ರೂಪಾಯಿ ಬೀಡುಗಡೆ ಮಾಡಲಾಗಿದೆ ಕೊಳವೆಬಾವಿ ಪ್ರೆಸ್ಸಿಂಗ್’ಗೆ 20 ಲಕ್ಷ ರೂ. ಅನುದಾನ ಕೊಡುವುದಾಗಿ ತಿಳಿಸಿದರು.

ಕುಡಿಯುವ ನೀರು, ಪಟ್ಟಣ ಸ್ವಚ್ಛತೆಗೆ ಆಧ್ಯತೆ ನೀಡಿ : ಕುಷ್ಟಗಿ ಪಟ್ಟಣಕ್ಕೆ ಆಲಮಟ್ಟಿಯಿಂದ ಕುಡಿಯುವ ನೀರು ಪೂರೈಸಲು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಪ ವಿಭಾಗಕ್ಕೆ ಪುರಸಭೆಯಿಂದ ಸುಮಾರು 1.33 ಕೋಟಿ ರೂ. ಪಾವತಿಸುವುದು ಬಾಕಿಯಿದೆ. ಪ್ರತಿ ತಿಂಗಳು 10 ಲಕ್ಷ ರೂ.ಗಳಂತೆ ಐದು ತಿಂಗಳಿನ ಹಣ ಪಾವತಿಸಲಾಗಿದೆ. ಬಾಕಿ ಹಣ ಹಿಂದಿನ ಬಾಕಿ ಹಣವನ್ನು ಕರ ವಸೂಲಿ ಮಾಡಿ ಪಾವತಿಸಬೇಕಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಾಸಕರ ಗಮನಕ್ಕೆ ತಂದರು. ಆಗ ಶಾಸಕ ದೊಡ್ಡನಗೌಡ ಪಾಟೀಲ್ ಪ್ರತಿಕ್ರಿಯಿಸಿ, ಆಲಮಟ್ಟಿ ಜಲಾಶಯದಲ್ಲಿ ಕೃಷ್ಣ ನದಿನೀರು ಸಂಗ್ರಹವಿದ್ದು, ಜೂನ್ ತಿಂಗಳವರೆಗೆ ಪಟ್ಟಣಕ್ಕೆ ನೀರಿನ ಕೊರತೆಯಾಗುವುದಿಲ್ಲ ಎಂದರು. ಬಾಕಿ ಹಣ ಕಾರಣವೊಡ್ಡಿ ಕೃಷ್ಣ ನದಿ ನೀರು ಪೂರೈಸುವುದನ್ನು ತಡೆಹಿಡಿಯಬಾರದು. ಪಟ್ಟಣದ ಜನತೆಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಸ್ವಚ್ಚತೆಗೆ ಆಧ್ಯತೆ ನೀಡಬೇಕು, ಅದೇರೀತಿ ತಾವರಗೇರಾ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಹ ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಶಾಸಕರು ಸೂಚಿಸಿದರು.

ತೋಟಗಾರಿಕೆ, ಕೃಷಿ ಇಲಾಖೆ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯಾಗಿದ್ದು, ರೈತರಿಗೆ ಬೆಳೆ ಪರಿಹಾರ ತ್ವರಿತಗತಿಯಲ್ಲಿ ತಲುಪಿಸಲು ಕ್ರಮ ವಹಿಸಬೇಕು. ಎಫ್ಐಡಿ ಜೋಡಣೆ ಕುರಿತು ರೈತರಿಗೆ ತಿಳುವಳಿಕೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಡಂಗುರ ಮೂಲಕ ರೈತರಿಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ದೊಡ್ಡನಗೌಡ ಪಾಟೀಲ್, ತಾಲೂಕಿನ ರೈತರ ಬೇಡಿಕೆ ಅನುಸಾರ ಬರುವ ಜೂನ್ ವರೆಗೂ ಮೇವು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಆದ್ದರಿಂದ ಅಗತ್ಯ ಮೇವಿನ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಅದೇರೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗೆ ಒಂದರಂತೆ ಜಾನುವಾರುಗಳ ಕುಡಿಯುವ ನೀರಿಗೆ ನೀರಿನ ತೊಟ್ಟಿ ನಿರ್ಮಿಸಲು ನರೇಗಾ ಅಧಿಕಾರಿಗಳಿಗೆ ಆದೇಶಿಸಿದರು.

ಈ ವೇಳೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಎಸ್.ಮಸಳಿ, ತಾಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರು ಹಾಗೂ ಕುಷ್ಟಗಿ ಪುರಸಭೆ, ತಾವರಗೇರಾ ಪಟ್ಟಣ ಪಂಚಾಯಿ ಮತ್ತು ನರೇಗಾ, ಪಂಚಾಯತ್ ರಾಜ್, ಸಿಡಿಪಿಒ, ಜೆಸ್ಕಾಂ, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಯ ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯಾಗಿದ್ದು, ರೈತರಿಗೆ ಬೆಳೆ ಪರಿಹಾರ ತ್ವರಿತಗತಿಯಲ್ಲಿ ತಲುಪಿಸಲು ಕ್ರಮ ವಹಿಸಬೇಕು. ಎಫ್ಐಡಿ ಜೋಡಣೆ ಕುರಿತು ರೈತರಿಗೆ ತಿಳುವಳಿಕೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಡಂಗುರ ಮೂಲಕ ರೈತರಿಗೆ ಜಾಗೃತಿ ಮೂಡಿಸಿ

ದೊಡ್ಡನಗೌಡ ಪಾಟೀಲ್  ಶಾಸಕರು, ಕುಷ್ಟಗಿ.