ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ವಿವಿದೋದ್ಧೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಚುನಾವಣೆಯಲ್ಲಿ ಸ್ಪರ್ಧಿಸಿ ಶೇರುದಾರರ ಮತ ಸೆಳೆಯಲು ಆಮಿಷವೊಡ್ಡಿ ಗೆಲ್ಲುವ ಇಂದಿನ ದಿನಮಾನಗಳಲ್ಲಿ ಇಲ್ಲೊಬ್ಬ ಅಧ್ಯಕ್ಷರು ಸಂಘದ, ಶೇರುದಾರರ ಕಲ್ಯಾಣಕ್ಕೆ ತಮ್ಮ 5 ವರ್ಷದ ಅವಧಿಯಲ್ಲಿ ದೊರೆಯುವ ವೇತನ ಹಾಗೂ ಭತ್ಯೆಯನ್ನು ನೀಡಲೊಪ್ಪಿರುವುದು ವಿಶೇಷ.
ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ದೊಡ್ಡಪ್ಪ ಅಯ್ಯಪ್ಪ ಚಿಟ್ಟಿ ಅವರು
ತಮ್ಮ 5 ವರ್ಷದ ಆಡಳಿತಾವಧಿಯಲ್ಲಿ ಸಿಗುವ ಸೊಸಾಯಿಟಿಯ ವೇತನ ಹಾಗೂ ಪ್ರತಿ ತಿಂಗಳ ಸಭೆಯ ಬತ್ಯೆಯನ್ನು ಸಂಘದ ಅಭಿವೃದ್ಧಿ ಕಾರ್ಯಕ್ಕೆ ಮತ್ತು ಸಂಘದ ಸದಸ್ಯರುಗಳು ಹಾಗೂ ಶೇರುದಾರರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಮತಿಸಿ ಮನಃಪೂರ್ವಕವಾಗಿ ಒಪ್ಪಿಗೆ ಪತ್ರವನ್ನು ಬರೆದು ಕಾರ್ಯನಿರ್ವಾಹಕ ಅಧಿಕಾರಿಗೆ ಅಕ್ಟೋಬರ್ 25 ರಂದು ಸಲ್ಲಿಸಿರುವುದು ಗಮನ ಸೆಳೆದಿದೆ. ಕುಷ್ಟಗಿ ತಾಲೂಕು ಮುಂಗಾರು, ಹಿಂಗಾರು ಮಳೆ ಕೈಕೊಟ್ಟು ತೀವ್ರ ಬರಗಾಲ ಅನುಭವಿಸುತ್ತಿರುವ ಸಮಯದಲ್ಲಿ ಸಂಘದ ಅಧ್ಯಕ್ಷರು ಈ ನಿರ್ಧಾರಕ್ಕೆ ಬಂದಿರುವುದು ಕೊಪ್ಪಳ ಜಿಲ್ಲೆಯ ಎಲ್ಲಾ ಸೊಸೈಟಿಗಳ ಅಧ್ಯಕ್ಷರು ಹಾಗೂ ನಿರ್ದೇಶಕರುಗಳಿಗೆ ಮಾದರಿಯಾಗಿದ್ದು, ಅಧ್ಯಕ್ಷರ ಈ ನಿರ್ಧಾರಕ್ಕೆ ಶೇರುದಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ.