ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸಬೇಕು ಎಂಬ ಛಲ ವಿದ್ಯಾರ್ಥಿಗಳಲ್ಲಿ ಬರಬೇಕು : ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸಬೇಕು ಎಂಬ ಛಲ ಬಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉತ್ತಮ ಹುದ್ದೆ ಪಡೆಯಬಹುದು. ಅಂತಹ ಒಳ್ಳೆಯ ಹುದ್ದೆ ಪಡೆಯಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಕಸಾಪ ಅಧ್ಯಕ್ಷ ವೀರೇಶ ಬಂಗಾರ ಶೆಟ್ಟರ್ ಅವರು ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದ ಶ್ರೀ ಪಾಂಡುರಂಗ ವಿಠ್ಠಲ ದೇವಸ್ಥಾನದ ಪ್ರಾಂಗಣದಲ್ಲಿ ದಿನಾಂಕ 21-11-2023ರಂದು ಮಂಗಳವಾರ ದಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಸಹಬಾಳ್ವೆ ಮತ್ತು ಶ್ರಮದಾನದಂತಹ ಮಹತ್ವದ ಚಿಂತನೆಗಳನ್ನು ಕಲಿಸುವ ಈ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರಗಳು ಉತ್ತಮ ವೇದಿಕೆಗಳಾಗಿದ್ದು, ಇಲ್ಲಿ ಸಿಕ್ಕಿರುವ ಸದಾವಕಾಶ ಬಳಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಿ ಎಂದು ಕರೆ ನೀಡಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಮೂರನೇ ವಾರ್ಡಿನ ರಹವಾಸಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ. ವಾಯ್. ಲೋಕರೆ ಅವರು ತಮ್ಮ ಕಾಲೇಜು ದಿನಗಳಲ್ಲಿ ನಡೆದ ರಾಷ್ಟ್ರೀಯ ಸೇವಾಯೋಜನೆ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಹನುಮೇಶ ಡಬೇರ ರವರು ಮಾತನಾಡಿ, ಭಗವಂತನ ಖಾತೆಯಲ್ಲಿ ಜಮಾವಣೆಗೊಳ್ಳುವ ನಮ್ಮ ಸೇವೆ ಕುರಿತು ಭಗವದ್ಗೀತೆಯ ಉವಾಚದ ಮೂಲಕ ಮನಮುಟ್ಟುವಂತೆ ತಿಳಿಸಿದರು.

ರಾಷ್ಟ್ರೀಯ ಸೇವಾಯೋಜನೆ ಶಿಬಿರದ ಗುಲಾಬಿ ತಂಡದ ಸದಸ್ಯರು ಎಲ್ಲಾ ಕಾರ್ಯಗಳನ್ನು  ನಿರ್ವಹಿಸಿದರು. ಕಾರ್ಯಕ್ರಮದ ಅಧಿಕಾರಿ ಡಾ. ನಾಗರಾಜ ಹೀರಾ ರವರು ಶಿಬಿರ ಒಂದು ವಾರ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು.

ಈ ವೇಳೆ ವಿಶ್ರಾಂತ ಉಪನ್ಯಾಸಕರಾದ ಜಿ. ಆರ್. ಬಡಿಗೇರ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ವಿಜಯವಿಠಲ ವಿದ್ಯಾಮಂದಿರದ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಷ್ಟಗಿಯ ಎಲ್ಲಾ ಉಪನ್ಯಾಸಕರು ಹಾಜರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಮಲ್ಲಿಕಾರ್ಜುನ ನಿರ್ವಹಿಸಿದರು.