ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಮುಸ್ಲಿಂ ಯುವಕನೋರ್ವ ಸಾಮಾಜಿಕ ಜಾಲತಾಣ ಮೊಬೈಲ್ ಸ್ಟೇಟಸಲ್ಲಿ ತನ್ನ ಭಾವಚಿತ್ರದೊಂದಿಗೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರ ಅತಿಥಿಯಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಬಂಧಿತ ಯುವಕ ರಾಜೇಸಾಬ ಮಹ್ಮದಸಾಬ ನಾಯಕ (30) ಪಟ್ಟಣದ ನಿವಾಸಿಯಾಗಿದ್ದು, ಪಂಚರ್ ಶಾಪ್ ನಡೆಸುತ್ತಿದ್ದಾನೆ. ತಾವರಗೇರಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಯಶವಂತ ಬಿಸನಳ್ಳಿ ಅವರು ತಿಳಿಸಿದ್ದಾರೆ. ಈ ಘಟನೆ ಕುರಿತು ತಾವರಗೇರಾ ಪಟ್ಟಣದಲ್ಲಿ ಹಿಂದು ಸಂಘಟನೆಗಳ ಪ್ರಮುಖ ನಾರಾಯಣಸಿಂಗ್ ಗುಡಸಾಲಿ ಖಂಡಿಸಿ, ಭಾರತ ನೆಲದಲ್ಲಿ ಹುಟ್ಟಿ ಇಲ್ಲಿಯೇ ಜೀವನ ನಡೆಸುತ್ತಿರುವ ಯುವಕ, ಪಾಕಿಸ್ತಾನ ದೇಶದ ಭಾವುಟವನ್ನು ತನ್ನ ಫೋಟೋದೊಂದಿಗೆ ಮೊಬೈಲ್ ಸ್ಟೇಟಸಲ್ಲಿ ಹಾಕಿ ಪಾಕಿಸ್ತಾನ ಪ್ರೇಮ ಮೆರೆಯುವ ಮೂಲಕ ದೇಶದ್ರೋಹಿ ಕೆಲಸ ಮಾಡಿದ್ದಾನೆ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಯುವಕನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.