ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿಗೆ ಮುಖ್ಯಶಿಕ್ಷಕ ಶರಣಪ್ಪ ತುಮರಿಕೊಪ್ಪ ಆಯ್ಕೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ ತುಮರಿಕೊಪ್ಪ ಅವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯವರು ಕೊಡಮಾಡುವ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಿ.10ರಂದು ಭಾನುವಾರ ನವದೆಹಲಿಯಲ್ಲಿ ನಡೆಯುವ 39ನೇ ದಲಿತ ಲೇಖಕರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಸ್ವೀಕಾರ ಮಾಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿರುವ ಶರಣಪ್ಪ ತುಮರಿಕೊಪ್ಪ ಅವರು ಶಾಲಾ ಅಭಿವೃದ್ಧಿಯಲ್ಲಿ ಜನಸಮುದಾಯದ ಸಹಕಾರದೊಂದಿಗೆ ಕ್ರಿಯಾಶೀಲವಾಗಿ ಕಾರ್ಯ ಮಾಡಿದ್ದಾರೆ. ಸಮುದಾಯ ಸಹಭಾಗಿತ್ವದಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ನಿರ್ಮಿಸಿ ಬೋಧನಾ ವಿಧಾನದಲ್ಲಿ ನಾವಿನ್ಯ ಮಾದರಿಗಳನ್ನು ಅಳವಡಿಸಿಕೊಂಡಿರುವುದು ವಿಶೇಷ. ಶೈಕ್ಷಣಿಕ ಗುಣಮಟ್ಟ ಮತ್ತು ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬಿಆರ್.ಸಿ. ಡಾ.ಜೀವನಸಾಬ ಬಿನ್ನಾಳ ಅವರು ಮಾಹಿತಿ ನೀಡಿದ್ದಾರೆ.

ಮುಖ್ಯಶಿಕ್ಷಕ ಶರಣಪ್ಪ ತುಮರಿಕೊಪ್ಪ ಅವರು ಪ್ರಶಸ್ತಿಗೆ ಆಯ್ಕೆ ಆಗಿರುವುದನ್ನು ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಸೇರಿದಂತೆ ಸಮನ್ವಯಾಧಿಕಾರಿ ಜಗದೀಶಪ್ಪ ಎಮ್ ಹಾಗೂ ಕುಷ್ಟಗಿ ತಾಲೂಕಿನ ಸರ್ವ ಶಿಕ್ಷಕ ಬಳಗ ಹರ್ಷ ವ್ಯಕ್ತಪಡಿಸಿದೆ.