ದಿ ವಿಜಡಂ ಪ್ರೈಮರಿ ಶಾಲೆ ವಿದ್ಯಾರ್ಥಿಗಳಿಂದ ಸಾಮಾಜಿಕ ಸುಧಾರಣೆ, ಸ್ವಚ್ಛತಾ ಜಾಗೃತಿ ಜಾಥಾ

ಮಹಾಂತೇಶ ಚಕ್ರಸಾಲಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ: ತಾಲೂಕಿನ ನೀಲೋಗಲ್ ಗ್ರಾಮದ ದಿ ವಿಜಡಂ ಪ್ರೈಮರಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಡಿ.12 ಮಂಗಳವಾರ ಹನುಮನಾಳ ಗ್ರಾಮದಲ್ಲಿ ಸಾಮಾಜಿಕ ಸುಧಾರಣೆ ಮತ್ತು ಸ್ವಚ್ಛತೆ ಮಹತ್ವ ಕುರಿತು ಜಾಥಾ ನಡೆಸುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಮಿಟ್ಟಲಕೋಡನ ಶ್ರೀ ಸಂಗಮೇಶ್ವರ ಎಜುಕೇಶನ್ ಟ್ರಸ್ಟ್ ನೀಲೋಗಲ್ ಗ್ರಾಮದ ದಿ ವಿಜಡಂ ಪ್ರೈಮರಿ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಹಮ್ಮಿಕೊಂಡಿದ್ದ ಈ ವೊಂದು ಜಾಗೃತಿ ಜಾಥಾ ಹನುಮನಾಳ ಗ್ರಾಮದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಜಾಥಾ ಉದ್ದಕ್ಕೂ ವಿದ್ಯಾರ್ಥಿಗಳು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಮನೆಗೊಂದು ಮರ ಊರಿಗೊಂದು ವನ, ಮನೆಗೊಂದು ಪಾಯಖಾನೆ, ಬಾಲ್ಯ ವಿವಾಹ ತಡೆಗಟ್ಟುವುದು, ಪರಿಸರ ಸಂರಕ್ಷಣೆ, ಶೌಚಾಲಯ ಬಳಕೆ ಕುರಿತು ಘೋಷಣೆಗಳನ್ನು ಮೊಳಗಿಸಿದರು.
ಬಳಿಕ ವಿದ್ಯಾರ್ಥಿಗಳು ಜನನಿಬಿಡ ಸ್ಥಳದಲ್ಲಿ ಶಿಕ್ಷಣದ ಮಹತ್ವ ಕುರಿತು ಕಿರು ನಾಟಕ ಪ್ರದರ್ಶನ ಮಾಡಿ ಗಮನ ಸೇಳೆದರು. ಮಕ್ಕಳ ಪ್ರತಿಭೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಶರಣಯ್ಯ ಹಿರೇಮಠ, ಉಪಾಧ್ಯಕ್ಷ ಬಸವರಾಜ ಹಿರೇಮಠ, ಕಾರ್ಯದರ್ಶಿ ಶಂಭು ಹಿರೇಮಠ, ಮುಖ್ಯೋಪಾಧ್ಯಾಯ ಗುರುರಾಜ ಅಂಗಡಿ, ಶಿಕ್ಷಕರಾದ ರೇಷ್ಮಾ ಭಾಗವಾನ, ಆಫ್ರಿನ್ ಮುಚಾಲಿ, ಲಕ್ಷ್ಮೀ ಕುರಟ್ಟಿ, ಆಫ್ರಿನ್ ಹವಾಲ್ದಾರ್, ನಾಗರತ್ನ ಜಗದೀಶ್ ಹಿರೇಮಠ, ಫಕೀರಪ್ಪ ಮಂಡಗಿ, ಗ್ಯಾನಪ್ಪ ಬಸಣ್ಣಿ, ಮಳೆಯಪ್ಪ ಸೇರಿದಂತೆ ಗ್ರಾಮದ ಮುಖಂಡರು, ಯುವಕರಾದ ರುದ್ರಯ್ಯ ಹಿರೇಮಠ, ಮಂಜು, ಶಿವಕುಮಾರ ಶರಣಪ್ಪ ಕುಂಬಾರ ಇನ್ನಿತರರು ಉಪಸ್ಥಿತರಿದ್ದರು.