ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಸಿರಿಧಾನ್ಯಗಳನ್ನು ಬೆಳೆಯಲು ಮತ್ತು ಬಳಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲವಾಗಿ ಸಿರಿಧಾನ್ಯ ಸ್ವಾಗತಿಸಿ ಎಂಬ ಘೋಷವಾಕ್ಯದೊಂದಿಗೆ ಕೃಷಿ ಇಲಾಖೆ ನೌಕರರು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅಂತರ ಜಿಲ್ಲಾ ಸಿರಿಧಾನ್ಯ ಕ್ರಿಕೆಟ್ ಟೂರ್ನಾಮೆಂಟ್ ಹಮ್ಮಿಕೊಂಡಿದ್ದು ವಿಶೇಷ.!
ಅಂತರರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ -2024ರ ಅಂಗವಾಗಿ ಇದೇ ಡಿ.23ರ ರಂದು ಜಿಲ್ಲೆಯ ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ನಡೆಯುವ ಸಿರಿಧಾನ್ಯ ಹಬ್ಬದ ಪ್ರಯುಕ್ತ ಭಾನುವಾರ ದಿನ ಹಮ್ಮಿಕೊಂಡಿದ್ದ ಇಲ್ಲಿಯ ತಾಲೂಕಾ ಕ್ರೀಡಾಂಗಣದಲ್ಲಿ ಅಂತರ ಜಿಲ್ಲಾ ಸಿರಿಧಾನ್ಯ ಕ್ರಿಕೆಟ್ ಕಪ್ ಕಾರ್ಯಕ್ರಮಕ್ಕೆ ಬಾಗಲಕೋಟೆ ಜಿಲ್ಲಾ ಕೃಷಿ ಇಲಾಖೆ ಜೆಡಿಎ ಲಕ್ಷ್ಮಣ ಎಸ್. ಕಳ್ಳೆನ್ನವರ ಆಯಾ ತಂಡಗಳ ಜರ್ಸಿಗಳನ್ನು ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು.
ಟೂರ್ನಾಮೆಂಟ್ ಆಯೋಜಕ ಕೊಪ್ಪಳ ಜಿಲ್ಲೆ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, ಇಂದಿನ ನಮ್ಮ ಜೀವನ, ದೈಹಿಕ ಕಸರತ್ತು ಹಾಗೂ
ಗುಣಮಟ್ಟದ ಆಹಾರ ಪದ್ಧತಿ ಇಲ್ಲದಿರುವುದಕ್ಕೆ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್, ಮಧುಮೇಹ, ಹೃದಯಾಘಾತ ಅಂತಹ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗಲು ಕಾರಣವಾಗಿದೆ. ಆರೋಗ್ಯ ಚೆನ್ನಾಗಿದ್ದರೆ ಉತ್ತಮವಾಗಿ ಜೀವನ ನಿರ್ವಹಣೆ ಸಾಧ್ಯವಿದೆ. ಹಾಗಾಗಿ ಆರೋಗ್ಯ ವೃದ್ಧಿಗೆ ಸಿರಿಧಾನ್ಯ ಸೇವನೆ ತುಂಬಾ ಅವಶ್ಯವಿದೆ. ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ ಆಡುವುದರಿಂದ ಮಾನಸಿಕವಾಗಿ ದೈಹಿಕವಾಗಿ ಸದೃಢರಾಗುತ್ತೇವೆ. ದೈನಂದಿನ ಕಾರ್ಯಗಳಲ್ಲಿ ಒತ್ತಡ ನಿರ್ವಹಣೆ ನಿಭಾಯಿಸಲು ಕೃಷಿ ಇಲಾಖೆಯ ನೌಕರರಿಂದ ಅಂತರ ಜಿಲ್ಲಾ ಸಿರಿಧಾನ್ಯ ಕ್ರಿಕೆಟ್ ಕಪ್ ಆಯೋಜಿಸಲಾಗಿದೆ. ಕುಷ್ಟಗಿ ತಾಲೂಕಿನ ಟೆಕ್ಕಳಕಿ ಗ್ರಾಮದ ಸಿರಿಧಾನ್ಯ ಬೆಳೆಗಾರ ರೈತ ಶಿವಾನಂದ ಪಾಟೀಲ್ ಅವರು ಟೂರ್ನಾಮೆಂಟ್ ಅಲ್ಲಿ ಭಾಗವಹಿಸಿರುವ ತಂಡಗಳಿಗೆ ಮದ್ಯಾಹ್ನ ಸಿರಿಧಾನ್ಯಗಳಿಂದ ತಯಾರಿಸಿದ ಊಟ ಹಾಗೂ ಸಿಹಿ ಖಾದ್ಯಗಳ ವ್ಯವಸ್ಥೆ ಮಾಡಿದ್ದಾರೆ. ಸ್ವೀಕರಿಸುವ ಮೂಲಕ ಉತ್ತಮವಾಗಿ ಆಟವಾಡಿ ಎಂದು ಕರೆ ನೀಡಿದ ಅವರು, ಮುಂದಿನ ವರ್ಷ ವಿಜಯಪುರದಲ್ಲಿ ಟೂರ್ನಾಮೆಂಟ್ ಆಯೋಜಿಸಲಾಗುತ್ತದೆ ಎಂದು ಹೇಳಿದರು.
ವಿಜಯನಗರ ಜಿಲ್ಲೆ ಜೆಡಿಎ ಶರಣಪ್ಪ ಮುದುಗಲ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಿಡಿಎ ನಯೀಮ್ ಪಾಷಾ,
ಕೊಪ್ಪಳ ಜಿಲ್ಲಾ ಹಸಿರು, ನೀಲಿ ಜರ್ಸಿ ತಂಡಗಳ ನಾಯಕರಾದ ಸಂತೋಷ ಪಟ್ಟದಕಲ್ಲು, ನಿಂಗಪ್ಪ ಬಾಗಲಕೋಟೆ ಹಳದಿ ಜರ್ಸಿ ತಂಡಗಳ ನಾಯಕರಾದ ಮಲ್ಲಪ್ಪ ಬುಜಕೂರು, ಸಂಗಮೇಶ ಗೂಳಪ್ಪಗೋಳ, ವಿಜಯನಗರ ಬಿಳಿ ಜರ್ಸಿ ತಂಡದ ನಾಯಕ ಸುನಿಲ್ ನಾಯಕ, ರಾಯಚೂರು ಗುಲಾಬಿ ಜರ್ಸಿ ತಂಡದ ನಾಯಕ ಮಿಯಾಜ ಮಹ್ಮದ್ ಉಪಸ್ಥಿತರಿದ್ದರು.
ಬಳಿಕ ಕ್ರಿಕೆಟ್ ಟೂರ್ನಾಮೆಂಟ್’ಗೆ ವಿಜಯನಗರ ಜಿಲ್ಲೆ ಜೆಡಿಎ ಶರಣಪ್ಪ ಮುದುಗಲ್ ಅವರು ಚಾಲನೆ ನೀಡಿದರು. ಕೊಪ್ಪಳದ ಹಸಿರು ಜರ್ಸಿ ತಂಡ ಹಾಗೂ ಬಾಗಲಕೋಟೆ ಹಳದಿ ಜರ್ಸಿ ತಂಡದ ನಡುವಿನ ಪಂದ್ಯಕ್ಕೆ ಡಿಡಿಎ ನಯೀಮ್ ಪಾಷಾ ಅವರು ಟಾಸ್ ಮಾಡುವ ಮೂಲಕ ಶುಭ ಕೋರಿದರು.