ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಬುರ್ತಿ ಗ್ರಾಮದಲ್ಲಿ ಹೂಳು ತುಂಬಿದ ಚರಂಡಿಗಳಿಂದ ದುರ್ನಾತ ಹರಡಿದ್ದು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು ಕಾಲಕಳೆಯುವಂತಾಗಿದೆ.
ಈ ಕುರಿತು ಮಾಧ್ಯಮ ಮುಂದೆ ಬುಧವಾರ ದೂರು ವ್ಯಕ್ತಪಡಿಸಿರುವ ಗ್ರಾಮಸ್ಥರು, ಗ್ರಾಮದ ಮನೆಗಳ ಕೊಳಚೆ, ಬಚ್ಚಲು ಮೋರೆ ನೀರು ದೊಡ್ಡ ಕಾಲುವೆಗೆ ಹರಿಬಿಡಲಾಗಿದೆ. ಈ ಕಾಲುವೆ ಹೂಳು, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯ ತುಂಬಿಕೊಂಡು ಗಬ್ಬುನಾಥ ಹರಡಿಕೊಂಡಿದೆ. ಕೊಳಚೆ ನೀರು ಮುಂದೆಹರಿದು ಹೋಗದೇ ಕಾಲುವೆಯಲ್ಲಿ ಸಂಗ್ರಹಗೊಂಡು ಪಾಚುಗಟ್ಟಿದೆ, ಗಿಡಗಳು ಬೆಳೆದುಕೊಂಡಿವೆ. ಇದರಿಂದ ವಿಷ ಜಂತುಗಳು ಸೇರಿದಂತೆ ಲಾರ್ವಾ ಸೊಳ್ಳೆಗಳ ಉತ್ಪತ್ತಿ ಸ್ಥಾನವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಒಂದನೇ ಅಂಗನವಾಡಿ ಕೇಂದ್ರವಿದ್ದು ಚಿಕ್ಕಮಕ್ಕಳು ಇಂತಹ ಮಲಿನಗೊಂಡ ಪ್ರದೇಶದಲ್ಲಿ ಪಾಠ ಕಲಿಯುತಿದ್ದಾವೆ. ಸೊಳ್ಳೆಗಳ ಕಾಟದಿಂದ ಹಾಗೂ ದುರ್ನಾತದಿಂದ ರೋಸಿಹೋಗಿದ್ದು, ಮಲೇರಿಯಾ, ಚಿಕನ್’ಗುನ್ಯಾ, ಡೆಂಗ್ಯೂ ಜ್ವರದಂತ ಕಾಯಿಲೆಗಳ ಭೀತಿಯಲ್ಲಿದ್ದೇವೆ. ಗ್ರಾಮದಲ್ಲಿ ನಾಲ್ವರ ಗ್ರಾಮ ಪಂಚಾಯಿತಿ ಸದಸ್ಯರಿದ್ದು, ಅವರ ಗಮನಕ್ಕೂ ಇದೆ, ಕಾಲುವೆಗಳ ಹೂಳು ತೆಗೆಸಲು ಕ್ರಮ ಕೈಗೊಳ್ಳಿ ಎಂದು ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸುತಿದ್ದಾರೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕೋರಲಾಗಿದೆ. 15 ದಿನಗಳೊಳಗೇ ಗ್ರಾಮದ ಎಲ್ಲಾ ಚರಂಡಿಗಳ ಹೂಳು ತೆಗೆಸುವುದಾಗಿ ಹೇಳಿ ತಿಂಗಳಾದರೂ ಸ್ವಚ್ಛತೆಗೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಕುರಿತು ಹಿರೇಬನ್ನಿಗೋಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಮನಗೂಳಿ ಅವರ ಮೊಬೈಲ್ ಕರೆಗೆ ಸಂಪರ್ಕಿಸಿದಾಗ ನಾಳೆ ಗುರುವಾರದಿಂದ ಚರಂಡಿ ಸ್ವಚ್ಛತೆಗೆ ಕ್ರಮವಹಿಸುವುದಾಗಿ ತಿಳಿಸಿದ್ದಾರೆ.