ಕಲಾವಿದ ಮಾರೆಪ್ಪ ದಾಸರಗೆ ‘ಜನಪದ ಶ್ರೀ’ ಪ್ರಶಸ್ತಿ!

ಶರಣು ಲಿಂಗನಬಂಡಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದ ಹಿರಿಯ ಜಾನಪದ ಸಂಗೀತ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರೆಪ್ಪ ಮಾರೆಪ್ಪ ಚನ್ನದಾಸರ ಅವರು ರಾಜ್ಯ ಸರ್ಕಾರದಿಂದ ಕೊಡಮಾಡುವ ಜಾನಪದಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಜ.31 ಬುಧವಾರ ಸಿಎಂ ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಯವರು ‘ಜಾನಪದ ಶ್ರೀ’ ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷಗಳ ನಗದನ್ನು ಮಾರೆಪ್ಪ ಮಾರೆಪ್ಪ ಚನ್ನದಾಸರ ಅವರಿಗೆ ನೀಡಿ ಗೌರವಿಸಿದ್ದಾರೆ.
ಕಲಾವಿದ ಮಾರೆಪ್ಪ ದಾಸರ ಅವರು ನಾಡಿನ ಅನೇಕ ಕಡೆಗಳಲ್ಲಿ ನೀಡಿದ ಸಂಗೀತ ಪ್ರದರ್ಶನದಲ್ಲಿ ತಮ್ಮ ಇಂಪಾದ ಕಂಠದಲ್ಲಿ ಜಾನಪದ, ತತ್ವಪದ, ಹಂತಿಪದ, ವಚನ ಸಂಗೀತ, ಷರೀಫರ ತತ್ವಪದಗಳನ್ನು ಹಾಡಿ ಜಾನಪದ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಅವರ ಜೀವಮಾನದ ಸಾಧನೆ ಗುರುತಿಸಿ ರಾಜ್ಯ ಸರ್ಕಾರ 2020-21ನೇ ಸಾಲಿನ ಜನಪದ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿ ಘೋಷಣೆ ಮಾಡಲಾಗಿತ್ತು.

ಕೊಪ್ಪಳ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಾನಪದ ಸಂಗೀತ ಕ್ಷೇತ್ರದ ಕಲಾವಿದರು ಸೇರಿದಂತೆ ಸಾಂಸ್ಕೃತಿಕ ಹಾಗೂ ಸಾಹಿತ್ಯ ವಲಯ ಹರ್ಷವ್ಯಕ್ತಪಡಿಸಿದೆ.