ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ರವೀಂದ್ರನಾಥ ಠಾಗೂರು ಸೇರಿದಂತೆ ಆಂಗ್ಲ ಕವಿಗಳ ಸಾಹಿತ್ಯ ಮೀರಿಸುವಂತಹ ಸಾಹಿತ್ಯದ ಸೊಗಡು ದ.ರಾ. ಬೇಂದ್ರೆಯವರಲ್ಲಿತ್ತು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ಅಧಿಕಾರಿ, ಕವಿ ಅಮರೇಗೌಡ ಪಾಟೀಲ್ ಜಾಲಿಹಾಳ ಅವರು ಹೇಳಿದರು.
ಅವರು, ಜಿಲ್ಲೆಯ ಕುಷ್ಟಗಿ ಪಟ್ಟಣದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಬಳಿಯ ಹಿರಿಯ ನ್ಯಾಯವಾದಿ ಆಶ್ರೀತ ಅವರ ನಿವಾಸದಲ್ಲಿ ಆಶ್ರೀತ ಕುಟುಂಬ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಇವರುಗಳ ಸಹಯೋಗದಲ್ಲಿ ಬುಧವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ವರಕವಿ ದ.ರಾ.ಬೇಂದ್ರೆ ಅವರ128 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆಂಗ್ಲ ಪದಗಳ ಮೌಲ್ಯ ಕವಿತೆಗಳನ್ನು ರಚಿಸುವ ವಿಲಿಯಮ್ಸ್, ಕೀಟ್ಸ್ ಸೇರಿದಂತೆ ಭಾರತದ ರವೀಂದ್ರನಾಥ ಟ್ಯಾಗೋರ್ ಸಾಹಿತ್ಯ ಮೀರಿಸುವಂತಹ ಅಥವಾ ಸರಿಸಮಾನ ಸಾಹಿತ್ಯದ ಸೊಗಡು ನಮ್ಮ ನಾಡಿನ ವರಕವಿ ದ.ರಾ. ಬೇಂದ್ರೆಯವರಲ್ಲಿತ್ತು. ನಮ್ಮ ಕನ್ನಡತನ, ಕನ್ನಡ ಭಾಷೆ, ಅಂಥಸತ್ವ ಇಂದಿಗೂ ಏರುಗತಿಯಲ್ಲಿದೆ ಎಂದರೆ ದ.ರಾ. ಬೇಂದ್ರೆಯಂತವರಂತವರ ಸಾಹಿತ್ಯ ಕಾರಣವಾಗಿದೆ. ನಮ್ಮ ಕನ್ನಡ ಸಾಹಿತ್ಯ ಹಿಂದಿ, ಮರಾಠಿ, ತೆಲುಗು ಅವೆಲ್ಲವನ್ನು ಮೀರಿದ ಸಾಹಿತ್ಯವಾಗಿದೆ. ನಮ್ಮ ಕನ್ನಡ ಭಾಷೆ ಹುಟ್ಟಿನ ಜಾಡು ಹಿಡಿದರೆ ಮೂರು ಸಾವಿರದ ಎರಡುನೂರು ವರ್ಷಗಳ ಹಿಂದಿನವರೆಗೂ ಹೋಗುತ್ತದೆ. ಇಂತಹ ಕನ್ನಡ ಸಾಹಿತ್ಯವನ್ನು ದರಾ ಬೇಂದ್ರೆಯವರು ಮೂಲತಃ ಮರಾಟಿಗರಾಗಿದ್ದರೂ ಸಹ ಕನ್ನಡದ ವರಕವಿಯಾದರು. ಧಾರವಾಡದಲ್ಲಿ 1974ರಲ್ಲಿ ಅವರನ್ನು ಕಂಡು ಅವರ ಭಾಷಣ ಕೇಳುವ ಸೌಭಾಗ್ಯ ದೊರೆಯಿತು ಎಂದು ನೆನಪಿನ ಬುತ್ತಿ ಹಂಚಿಕೊಂಡರು.
ಬೇಂದ್ರೆಯವರ ಕವಿತೆಗಳನ್ನು ವಾಚಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ವರಕವಿ ದ.ರಾ.ಬೇಂದ್ರೆ ಅವರ ಭಾವಚಿತ್ರ ಪೂಜಿಸಿ ಪುಷ್ಪ ಸಭರ್ಪಿಸಿ ಗೌರವಿಸಲಾಯಿತು.
ಜಿ.ಪಂ. ಕಾರ್ಯದರ್ಶಿ ಸಾಹಿತಿ ಅಮೀನ್ ಅತ್ತಾರ, ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಕಾರ್ಯದರ್ಶಿ ಮಹೇಶ ಜಿ.ಹಡಪದ, ಭರತೇಶ ಜೋಷಿ ಬೇಂದ್ರೆ ಅವರ ಬದುಕು ಬರಹ ಕುರಿತು ಅಭಿಪ್ರಾಯ ಹಂಚಿಕೊಂಡರು.
ಈ ವೇಳೆ ಉಮೇಶ ನವಲಿ ಹಿರೇಮಠ, ಉಮೇಶ ಹಿರೇಮಠ, ಶ್ರೀರಂಗ ಬಳೂಟಗಿ, ಬಾಬು ಘೋರ್ಪಡೆ, ಕೃಷ್ಣ ಆಶ್ರೀತ, ಪಾಂಡುರಂಗ ಆಶ್ರೀತ, ಮಲ್ಲಿನಾಥ ನಾಗರಾಜ ಬಡಿಗೇರ, ಶ್ರೀನಿಧಿ ದಿಗ್ಗಾವಿ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು.
ನಮ್ಮ ಕನ್ನಡ ಸಾಹಿತ್ಯ ಹಿಂದಿ, ಮರಾಠಿ, ತೆಲುಗು ಅವೆಲ್ಲವನ್ನು ಮೀರಿದ ಸಾಹಿತ್ಯವಾಗಿದೆ. ನಮ್ಮ ಕನ್ನಡ ಭಾಷೆ ಹುಟ್ಟಿನ ಜಾಡು ಹಿಡಿದರೆ ಮೂರು ಸಾವಿರದ ಎರಡುನೂರು ವರ್ಷಗಳ ಹಿಂದಿನವರೆಗೂ ಹೋಗುತ್ತದೆ.
– ಅಮರೇಗೌಡ ಪಾಟೀಲ್ ಜಾಲಿಹಾಳ (ಅಮರ್ಜಾ) ಕವಿ, ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ.